ಬಾವರೀ ಪಂಥ -
ಉತ್ತರ ಭಾರತದ ಒಂದು ಭಕ್ತಿ ಪಂಥ. ನಿರ್ಗುಣೋಪಾಸನೆ ಇದರ ಬೀಜತತ್ತ್ವ. ಬಾವರೀ ಎಂದರೆ ಹೆಬ್ಬಯಕೆಯ ಹುಚ್ಚು ಎಂದರ್ಥ. ಪರಮಾತ್ಮನ ಲೀಲೆ ಕಂಡು ನಿಬ್ಬೆರಗಾಗಿ ಆತನನ್ನು ಪಡೆಯುವ ಆಸೆಯಲ್ಲಿ ಅಮಲೇರಿದಂತೆ ಭಕ್ತ ನಿಮಗ್ನನಾಗಿರುವ ಅವಸ್ಥೆಯೇ ಬಾವರೀಯ ಲಕ್ಷಣ. ಬಾವರೀ ಎಂಬ ಓರ್ವ ಸ್ತ್ರೀಭಕ್ತಳಿಂದ ಪಂಥಕ್ಕೆ ಈ ಹೆಸರು ಬಂತೆಂದು ಹೇಳಲಾಗುತ್ತದೆ. ಆದರೆ ಕೆಲವರ ಪ್ರಕಾರ ಗಾಜೀಪುರ ಜಿಲ್ಲೆಯ ಪಟ್ಟಾಗ್ರಾಮದಲ್ಲಿದ್ದ ಸಂತ ರಾಮಾನಂದ ಎಂಬ ಸಾಧುವಿನಿಂದ ಈ ಪಂಥ ಪ್ರಾರಂಭವಾಯಿತೆಂದು ತಿಳಿದುಬರುತ್ತದೆ. ತುಲಸೀದಾಸನ ಗುರು ರಾಮಾನಂದ ಮತ್ತು ಈತ ಬೇರೆ ಬೇರೆ ವ್ಯಕ್ತಿಗಳು. ಈ ಪಂಥದಲ್ಲಿ ಅನೇಕ ಸಂತರು, ಸಾಧುಗಳು ಆಗಿದ್ದಾರೆ. ವ್ಯಕ್ತಿಗತ ಸದಾಚಾರ ಹಾಗೂ ಗುರು ಇವು ಇಲ್ಲಿ ಬಹಳ ಮುಖ್ಯವಾದ ವಸ್ತುಗಳು. ಸದ್ಗುರುವಿನ ಕೃಪೆಯಿಂದ ಮಾತ್ರ ಪರಮತತ್ತ್ವದ ಲಬ್ಧಿಯಾಗುತ್ತದೆ. 'ಸ್ವಾನುಭೂತಿ' ಮತ್ತು 'ಸುರತಿ' ಇವೆರಡೂ ಗುರುವಿನ ಕೃಪೆಯಿಂದಲೇ ಸಂಘಟಿಸುತ್ತವೆ. ಇಲ್ಲಿಯ ಆತ್ಮಯೋಗ ಜ್ಞಾನಯೋಗದ ಒಂದು ಬೈಠಕ್ (ಗೋಷ್ಠಿ) ಆಗಿರುತ್ತದೆ. ಇಲ್ಲಿ ಬ್ರಹ್ಮ ಚೇತನ ಒಂದು ನಿರಂತರ ಶೂನ್ಯ. ಈ ಪಂಥದ ಮೇಲೆ ವೇದಾಂತ ಹಾಗೂ ಸೂಫೀಮತಗಳ ವಿಶೇಷ ಪ್ರಭಾವವಿದೆ. ಯಾರೀಸಾಹೇಬ್ ಮೂಲಕ ಸೂಫೀ ಪ್ರಾಭಾವ ಈ ಪಂಥದಲ್ಲಿ ಹರಡಿತೆಂದು ತಿಳಿದುಬರುತ್ತದೆ.

ಈ ಪಂಥಕ್ಕೆ ಸಂಬಂಧಿಸಿದ ಕೃತಿಗಳನ್ನು ಅನೇಕರು ರಚಿಸಿದ್ದಾರೆ. ಅವರಲ್ಲಿ ರತ್ನಾವಲೀ ಕೃತಿಯ ಯಾರೀ ಸಾಹೇಬ್, ಅಮೀಘೂಂಟ್ ಕೃತಿಯ ಕೇಸೋದಾಸ, ಶಬ್ದಸಾಗರ ಕೃತಿಯ ಬೂಲಾಸಾಹೇಬ್, ಜ್ಞಾನಮುಷ್ಟೀ ಮತ್ತು ರಾಮಸಹಸ್ರನಾಮ ಕೃತಿಗಳ ಗುಲಾಲ್ ಸಾಹೇಬ್ ರಾಮಕುಂಡಲಿಯಾಂ ಕೃತಿಯ ಭೀಖಾಸಾಹೆಬ್ ಮೊದಲಾದವರು ಪ್ರಸಿದ್ದರು.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ